ಪೌರಾಣಿಕ ಹಾಗೂ ಭಕ್ತಿ ಪ್ರಧಾನ ನಾಟಕಗಳು ನಮ್ಮ ಜೀವನದ ಪ್ರತಿಬಿಂಬ ವಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿ ದೀಪವಾಗಿವೆ ಎಂದು ಉಧ್ಯಮಿ ಹಾಗೂ ಸಮಾಜಸೇವಕರಾದ ಪೂನಾ ಶಂಕರ್ ಹೇಳಿದರು
ಅವರು ಕೃಷ್ಣರಾಜಪೇಟೆ ಪಟ್ಟಣದಲ್ಲಿ ಡಾ. ರಾಜ್ ಕುಮಾರ್ ಕಲಾ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ನಾಟಕೋತ್ಸವದಲ್ಲಿ ಕೆ. ಆರ್. ಪೇಟೆಯ ಜೈ ಭುವನೇಶ್ವರಿ ಕಲಾ ಸಂಘದ ಸದಸ್ಯರು ಪ್ರದರ್ಶಿಸಿದ ಭಕ್ತ ಮಹಂಧಾತ ಅಥವಾ ಶ್ರೀ ಲಕ್ಷ್ಮೀಶನೇಶ್ವರರ ಪಂಥ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ರಂಗಭೂಮಿ ನಿರ್ದೇಶಕ ಯಗಚಗುಪ್ಪೆ ಧನಂಜಯ ಅವರಿಗೆ ಅಭಿಮಾನಿಗಳು ಹಾಗೂ ಶಿಷ್ಯ ವೃಂದವು ಕೊಡುಗೆಯಾಗಿ ನೀಡಿದ ಬಂಗಾರದ ಕಡಗವನ್ನು ತೊಡಿಸಿ ಮಾತನಾಡಿದರು.
ರಂಗಭೂಮಿ ಕಲೆಗಳು ಸೇರಿದಂತೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಭಾಗವಾಗಿರುವ ಪೌರಾಣಿಕ ನಾಟಕಗಳು ದೂರದರ್ಶನ ಹಾಗೂ ಚಲನಚಿತ್ರ ಮಾಧ್ಯಮಗಳ ಹೊಡೆತದಿಂದ ಕಣ್ಮರೆಯಾಗುತ್ತಿರುವ ಸಮಯದಲ್ಲಿ ಡಾ. ರಾಜ್ ಕುಮಾರ್ ಕಲಾ ಸಂಘದ ನೇತೃತ್ವದಲ್ಲಿ 10ದಿನಗಳ ಕಾಲ ರಾಜ್ಯಮಟ್ಟದ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿರುವುದು ವಿಶೇಷವಾಗಿದೆ ಯಲ್ಲದೆ ಇಡೀ ನಾಗರಿಕ ಸಮಾಜವೇ ಒಪ್ಪಿ ಸ್ವಾಗತಿಸುವ ವಿಚಾರವಾಗಿದೆ. ನಮ್ಮ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲಿ , ನ್ಯಾಯ ನೀತಿ ಹಾಗೂ ಧರ್ಮದ ಮಾರ್ಗದಲ್ಲಿಯೇ ಸಾಗಿ ಯಶಸ್ಸು ಪಡೆಯಬೇಕು ಎಂಬ ಸತ್ಯ ಸಂದೇಶ ನೀಡುವ ಪೌರಾಣಿಕ ನಾಟಕಗಳ ಮೂಲಕ ಸತ್ಯ ಹಾಗೂ ಧರ್ಮಕ್ಕೆ ಗೆಲುವು, ಅಸತ್ಯ ಹಾಗೂ ಅಧರ್ಮಕ್ಕೆ ಸೋಲು ನಿಶ್ಚಿತ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿ ನಮ್ಮನ್ನು ನ್ಯಾಯದ ದಾರಿಯಲ್ಲಿಯೇ ಸಾಗುವಂತೆ ಉತ್ತೇಜಿಸುತ್ತಿವೆ. ಓದು ಬರಹ ಗೊತ್ತಿಲ್ಲದ ರೈತಾಪಿ ವರ್ಗದ ಜನರೂ ಕೂಡ ನಾಟಕದಲ್ಲಿ ಪಾತ್ರಧಾರಿಗಳಾಗಿ ಅಭಿನಯಿಸಿ ಕಂಠ ಪಾಠ ಮಾಡಿದ ಕಂದ ಪದ್ಯಗಳು ಹಾಗೂ ಸಂಭಾಷಣೆಯನ್ನು ಯಾವುದೇ ತಪ್ಪಿಲ್ಲದಂತೆ ಹಾಡಿ ಸಾರ್ವಜನಿಕರಿಂದ ಚಪ್ಪಾಳೆ ಹಾಗೂ ಶಿಳ್ಳೆಯನ್ನು ಪಡೆಯುವುದನ್ನು ನೋಡಿದಾಗ ನಮ್ಮ ಜೀವನ ಹಾಗೂ ಬದುಕಿಗೆ ಸಾರ್ಥಕತೆ ದೊರೆಯುವ ಜೊತೆಗೆ ಯಾವುದೇ ತಪ್ಪುಮಾಡದಂತೆ ಸತ್ಯದ ಮಾರ್ಗದಲ್ಲಿ ಸಾಗುವಂತೆ ಉತ್ತೇಜನ ನೀಡುತ್ತಿರುವುದು ಕೂಡ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ವರದಾನವಾಗಿದೆ ಎಂದು ಶಂಕರ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್. ರಾಮೇಗೌಡ ವಿವಿಧ ಸಾಧಕರು ಹಾಗೂ ರಂಗಭೂಮಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ರಂಗಭೂಮಿ ಚಟುವಟಿಕೆಗಳನ್ನು ಜೀವಂತವಾಗಿಟ್ಟಿರುವ ಜೈ ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ಡಾ.ಕೆ.ಎನ್.ತಮ್ಮಯ್ಯ ಅವರ ಕಾರ್ಯದಕ್ಷತೆಯನ್ನು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ರಂಗ ಭೂಮಿ ನಟ ಸಿ.ಹೆಚ್. ನಾಗರಾಜು, ರಂಗಭೂಮಿ ನಿರ್ದೇಶಕ ಮಡುವಿನಕೋಡಿ ಪಾಪೇಗೌಡ, ದೇವರಾಜು ಹಾಗೂ ನಯನಜ ಕ್ಷತ್ರಿಯ ಸಮಾಜದ ಹಿರಿಯ ಮುಖಂಡ ಪಾಪಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಣ್ಣಿನ ಅಂಗಡಿ ರಾಮಣ್ಣ, ಕರೋಟಿ ಕುಮಾರ್, ಕಡ್ಲೆಕಾಯಿ ಕೃಷ್ಣ, ಹೊಸಹೊಳಲು ರಘು, ಸುರೇಶ್ ಹರಿಜನ, ಭಾರತೀಪುರ ಡಾ.ಪುಟ್ಟಣ್ಣ, ಮಹಿಳಾ ಹೋರಾಟಗಾರ್ತಿ ಡಾ. ಚಂದ್ರಕಲಾ ರಮೇಶ್, ಶೀಳನೆರೆ ಪ್ರಕಾಶ್, ಬಿ.ರಾಜಶೇಖರ್, ಶಾಮಿಯಾನ ತಿಮ್ಮೇಗೌಡ, ಗಿರೀಶ್, ಎಚ್.ಎನ್.ಪ್ರವೀಣ್, ಅಗ್ರಹಾರಬಾಚಹಳ್ಳಿ ವಾಸುದೇವೇಗೌಡ, ಆರ್. ಜಗಧೀಶ್ ಸೇರಿದಂತೆ ನೂರಾರು ಕಲಾವಿದರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.